-
Shree Vishwanatha Kshethra
Brahmashree Narayan Guru Seva Samiti ®
Katapadi – 574105
Udupi DistrictPH: 0820 2557060
http://katapadivishwanathakshethra.com
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ
ಕಿರು ಪರಿಚಯ
ಬಾಗಿಲೊಳು ಕೈ ಮುಗಿದು
ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು…
ಶೋಷಿತ ಜನಾಂಗದ ಜೀವನದಿಯ ಬುಗ್ಗೆಗಳನ್ನು ಪುನರುತ್ಥಾನಗೊಳಿಸಿದ ಭಗವತ್ ಸ್ವರೂಪ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಭಾವದ ಒಂದು ಜ್ಯೋತಿ ಕಿರಣವೇ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ.
ಶ್ರೀ ಗುರುಗಳವರು ೧೯೦೮ರಲ್ಲಿ ಮಂಗಳೂರಿನ ಕುದ್ರೋಳಿಯಲ್ಲಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯವನ್ನು ಪ್ರತಿಷ್ಠಾಪಿಸಿದರು. ೧೯೧೨ರಲ್ಲಿ ಅದು ಪೂರ್ಣರೂಪದ ದೇವಾಲಯವಾಗಿ ರೂಪುಗೊಂಡಿತು. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರಲ್ಲಿ ಹೊಸ ಚೈತನ್ಯ ಮೂಡಿತು. ದಿನೇ ದಿನೇ ಸಂಘಟನೆಯಿಂದ ಶಕ್ತಿ ಸಂಚಯನವಾಗತೊಡಗಿತು. ಬಿಲ್ಲವರ ಬದುಕಿಗೊಂದು ಪ್ರಗತಿಯ ಬಾಗಿಲು ತೆರೆಯಿತು.
ಕಟಪಾಡಿ ಬಳಿಯ ಪುಟ್ಟ ಊರು ಉಳಿಯಾರಗೋಳಿಯಿಂದ ಅಧ್ಯಾಪಕ ವೃತ್ತಿಯ ತರಬೇತಿ ಪಡೆಯಲು ಮಂಗಳೂರಿಗೆ ತೆರಳುತ್ತಿದ್ದ ಯುವಕ ನಮ್ಮೆಲ್ಲರ ಪ್ರಾತಸ್ಮರಣೀಯ ದಾದು ಮಾಸ್ತರರು ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಸ್ಥಾನ ಮತ್ತು ಅಲ್ಲಿಯ ಯುವಕರ ಸಂಘಟನಾ ಚಾತುರ್ಯದಿಂದ ಪ್ರೇರೇಪಿತರಾಗಿ ತನ್ನೂರಲ್ಲಿಯೂ ಇಂತದೇ ದೇವಸ್ಥಾನವಿದ್ದರೆ ನಮ್ಮೂರಿನ ಬಿಲ್ಲವರ ಬಾಳಿಗೊಂದು ದಿಕ್ಕುದೆಶೆ ಸಿಗುತ್ತದೆ ಎಂದು ಆಲೋಚನೆ ಮಾಡಿ ಯುವಕರನ್ನೆಲ್ಲ ಒಟ್ಟುಗೂಡಿಸಿ ತನ್ನ ಮನೆಯ ತುಳಸಿ ಕಟ್ಟೆಯಲ್ಲಿ ಭಜನೆ, ಸಂಕೀರ್ತನೆ ಹಾಡುತ್ತಾ ವರ್ಷಕ್ಕೊಮ್ಮೆ ಏಳು ದಿನಗಳ ಭಜನಾ ಸಪ್ತಾಹ ಪ್ರಾರಂಭಿಸಿದರು. ಇದರ ಪರಿಣಾಮವಾಗಿ ದಿನಾಂಕ ೦೯-೦೧-೧೯೩೪ರಲ್ಲಿ ಉಳಿಯಾರಗೋಳಿಯ ದಾದು ಮಾಸ್ತರರ ಮನೆಯಲ್ಲಿಯೇ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಮಿತಿ ಎಂಬ ಭಜನಾ ಮಂಡಳಿ ಜನ್ಮ ತಾಳಿತು.
ಈ ಮಧ್ಯೆ ೧೯೪೧ರ ಮೇ ತಿಂಗಳಲ್ಲಿ ನಾರಾಯಣ ಗುರುಗಳ ಶಿಷ್ಯರಾದ ಗುರುಪ್ರಸಾದ ಸ್ವಾಮೀಜಿಯವರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡುತ್ತಾ ಉಳಿಯಾರಗೋಳಿಯ ಈ ಸೇವಾ ಸಮಿತಿಗೂ ಭೇಟಿ ನೀಡಿದರು. ಆ ಸಮಯದಲ್ಲಿ ನೆರೆದ ಸಮಾಜ ಬಾಂಧವರು ತಮಗೂ ದೇವಸ್ಥಾನ ಆಗಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಸ್ವಾಮೀಜಿಯವರು ಕಟಪಾಡಿ ಏಣಗುಡ್ಡೆ ಗರಡಿಗೆ ಪ್ರಯಾಣ ಬೆಳೆಸುವ ಸಂದರ್ಭ ಈಗಿರುವ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಎದುರುಗಡೆಯಲ್ಲಿ ಸಾಗುತ್ತಿದ್ದಾಗ ಹಠಾತ್ತನೆ ಸ್ವಾಮೀಜಿಗಳ ವಾಹನ ಸ್ತಬ್ಧವಾಗಿ ನಿಂತು ಬಿಟ್ಟಿತು. ಯಾವುದೇ ಪ್ರಯತ್ನದಿಂದ ಅದು ಚಲಿಸದಿದ್ದಾಗ ತಕ್ಷಣ ಕೆಳಗಿಳಿದ ಸ್ವಾಮೀಜಿಗಳು ಪಶ್ಚಿಮಾಭಿಮುಖವಾಗಿ ನಿಂತು ಏನನ್ನೋ ಧ್ಯಾನಪೂರ್ವಕವಾಗಿ ವೀಕ್ಷಿಸಿ ಈ ಸ್ಥಳವು ಮಹಾ ಪವಿತ್ರ ಕ್ಷೇತ್ರವಾಗುವುದು. ನೀವು ದೇವಾಲಯ ಕಟ್ಟುವುದಾದರೆ ಇಲ್ಲಿ ಕಟ್ಟಬಹುದು ಎಂದರು. ಭಕ್ತ ಸಮೂಹ ನೋಡುತ್ತಿದ್ದಂತೆ ಯಾವುದೇ ಪ್ರಯತ್ನವಿಲ್ಲದೆ ವಾಹನ ಮುಂದೆ ಚಲಿಸಿತು. ಸ್ವಾಮೀಜಿಗಳು ಗುರುತಿಸಿದ ಈ ಸ್ಥಳ ಕೋಟೆ ಗ್ರಾಮಕ್ಕೆ ಸೇರಿದ್ದು ಈ ಜಾಗವನ್ನು ಮುಂಬಯಿಯ ಬಾರ್ಕೂರು ಬಿಲ್ಲವರ ಚಾರಿಟಿ ಸಂಘವು ಅಂದಿನ ಅಧ್ಯಕ್ಷರಾದ ದಿವಂಗತ ಪಿ.ಕೆ. ಸುವರ್ಣರ ಅಧ್ಯಕ್ಷತೆಯಲ್ಲಿ ಖರೀದಿಸಿ ೨೨-೧೧-೧೯೪೧ರಲ್ಲಿ ಸಮಿತಿಗೆ ದೇವಸ್ಥಾನ ಕಟ್ಟಲು ದಾನರೂಪವಾಗಿ ನೀಡಿತು.
೧೪-೦೩-೧೯೪೪ರಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಮಿತಿಯನ್ನು ಉಳಿಯಾರಗೋಳಿಯಿಂದ ಈಗ ದೇವಸ್ಥಾನವಿರುವ ಜಾಗಕ್ಕೆ ಸ್ಥಳಾಂತರಿಸಿ ನೋಂದಣಿ ಮಾಡಿ ಶ್ರೀ ಗುರುಪ್ರಸಾದ ಸ್ವಾಮೀಜಿಯವರಿಂದ ದೇವಸ್ಥಾನದಕ್ಕೆ ಶಂಕುಸ್ಥಾಪನೆ ಮಾಡಲಾಯಿತು.
೧೯೫೨ರ ಮಾರ್ಚ್ ೨೧ರ ಶುಭದಿನ ಶುಭಗಳಿಗೆಯಲ್ಲಿ ಶಿವಗಿರಿ ಮಠಾಧೀಶರಾಗಿದ್ದ ಶ್ರೀ ಶ್ರೀ ಶಂಕರಾನಂದ ಸ್ವಾಮೀಜಿಯವರ ಅಮೃತ ಹಸ್ತದಿಂದ ದೇವಸ್ಥಾನಕ್ಕೆ ಶಢಾಧಾರ ಪ್ರತಿಷ್ಠೆ ನೆರವೇರಿಸಲಾಯಿತು. ಈ ಮಧ್ಯೆ ಮುಂಬಯಿಯಲ್ಲಿ ಉಪಸಮಿತಿ ರಚನೆ ಮಾಡಿ ಧನ ಸಂಗ್ರಹ ಕಾರ್ಯ ಪರವೂರಿನಲ್ಲೂ ನಡೆಯಿತು. ದೇವಸ್ಥಾನ ನಿರ್ಮಾಣ ಕೆಲಸ ಭರದಿಂದ ಸಾಗಿತು. ಅಂದು ೧೯೬೪ರ ಫೆಬ್ರವರಿ ತಿಂಗಳ ೧೬ನೇ ಶುಭೋದಯ, ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಲಯದ (ಉಡುಪಿ ಜಿಲ್ಲೆ) ಬಿಲ್ಲವರ ಹಾಗೂ ಸಮಸ್ತ ಹಿಂದುಳಿದ ವರ್ಗದ ಧಾರ್ಮಿಕ ಆಶಾ ಕಿರಣವು ಶಿವನ ರೂಪದಲ್ಲಿ ಮೂಡಿ ಬರುತ್ತಲಿತ್ತು. ಸಹಸ್ರ ಸಂಖ್ಯೆಯಲ್ಲಿ ಭಕ್ತಜನ ನೆರೆದಿದ್ದರು. ಹನ್ನೆರಡು ವರ್ಷಗಳ ಹಿಂದೆ ತಾನೇ ಶಢಾಧಾರ ಪ್ರತಿಷ್ಠೆ ಮಾಡಿದ ಶಿವಾಲಯವನ್ನು ಶಿವಗಿರಿ ಮಠಾಧೀಶ ಶ್ರೀ ಶ್ರೀ ಶಂಕರಾನಂದ ಸ್ವಾಮೀಜಿಯವರು ಪ್ರತಿಷ್ಠಾಪನೆಗೈದರು. ಮಧ್ಯ ಗರ್ಭಗೃಹದಲ್ಲಿ ಶಿವನ ಸಾನಿಧ್ಯ ಪೌಳಿಯ ಸುತ್ತಲೂ ಶ್ರೀಕೃಷ್ಣ, ಗಣಪತಿ, ಸುಬ್ರಹ್ಮಣ್ಯ, ಮಾತೆ ಅನ್ನಪೂರ್ಣೇಶ್ವರಿಯನ್ನು ಪ್ರತಿಷ್ಠಾಪಿಸಲಾಯಿತು. ೨೩ ವರ್ಷಗಳ ಹಿಂದೆ ನಾರಾಯಣ ಗುರುಗಳ ಶಿಷ್ಯ ಗುರುಪ್ರಸಾದ ಸ್ವಾಮೀಜಿಯವರು ನುಡಿದ ಭವಿಷ್ಯವಾಣಿ ನಿಜವಾಯಿತು. ಶಿವಗಿರಿ ಮಠಾಧೀಶರಾದ ಶಂಕರಾನಂದ ಸ್ವಾಮೀಜಿಯವರು ಭಕ್ತ ಜನರ ಮುಂದೆ ಈ ದೇವಾಲಯಕ್ಕೆ ಶ್ರೀ ವಿಶ್ವನಾಥ ಕ್ಷೇತ್ರವೆಂದು ನಾಮ ಘೋಷಣೆ ಮಾಡಿದರು. ಕಟಪಾಡಿಯ ಹುಲಿ ಎಂದೇ ಪ್ರಖ್ಯಾತರಾಗಿದ್ದ ಬಿಲ್ಲವ ಜನಾಂಗದ ಧೀಮಂತ ನಾಯಕ ಕಟಪಾಡಿ ಮುದ್ದು ಸುವರ್ಣರ ನೇತೃತ್ವದಲ್ಲಿ ಸಮಸ್ತ ಬಿಲ್ಲವರ ಶ್ರಮದ ಫಲವಾಗಿ ದೇವಾಲಯದ ಪ್ರತಿಷ್ಠೆಯು ಅತ್ಯಂತ ವಿಜೃಂಭಣೆಯಿಂದ ಜರಗಿರುವುದು ಈಗ ಇತಿಹಾಸ. ಈ ಸಾಧನೆಯ ಹಿಂದೆ ಹಲವಾರು ಹಿರಿಯರ ಶ್ರಮವಿದೆ, ಛಲವಿದೆ, ಬೆವರ ಹನಿಯಿದೆ. ದಿ. ದಾದು ಮಾಸ್ಟರ್, ದಿ. ಕಾಳಪ್ಪ ಜತ್ತನ್ನ, ದಿ. ಪಿ.ಕೆ. ಸುವರ್ಣ, ದಿ. ಕೆ. ರಂಗ ಇವರ ಸೇವೆ ಅವಿಸ್ಮರಣೀಯ.
ನಂತರ ದಿನಗಳಲ್ಲಿ ಸುಸಜ್ಜಿತ ನಾರಾಯಣಗುರು ಸಭಾಭವನ, ಅನ್ನಪೂರ್ಣ ಗೃಹ, ಶಿವಾನುಗ್ರಹ ಸಭಾಗೃಹ, ಗುರುಪ್ರಸಾದ ಕಟ್ಟಡ, “ಪಿಲ್ಲಂತಟ” ಅರ್ಚಕರ ವಿಶ್ರಾಂತಿಗೃಹ, ಶಿಲಾಮಯ ಧ್ವಜಸ್ತಂಭ, ಶಂಕರಾಮೃತ ಪುಷ್ಕರಣಿ, ನಾಗಾಲಯ ಮತ್ತು ಅಯ್ಯಪ್ಪ ಗುಡಿ ನಿರ್ಮಾಣವಾಗಿದೆ.
ಕ್ಷೇತ್ರದ ಹೊರಭಾಗದಲ್ಲಿ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಗೆ ಕ್ಷೇತ್ರ ರಕ್ಷಕನಾಗಿ ಅಣ್ಣಪ್ಪ ದೈವ ಇರುವಂತೆ ಕಟಪಾಡಿ ವಿಶ್ವನಾಥ ಸ್ವಾಮಿಗೆ ಕ್ಷೇತ್ರ ರಕ್ಷಕನಾಗಿ ಕಲ್ಕುಡ ದೈವದ ಸಾನಿಧ್ಯವಿದೆ. ಈ ಕಲ್ಕುಡ ದೈವ ಪ್ರತಿ ಶನಿವಾರದಂದು ದರ್ಶನ ಸೇವೆಯ ಮೂಲಕ ಸಕಲ ಧರ್ಮದ ಜನರಿಗೆ ಸಂಕಷ್ಟಹರನಾಗಿದ್ದಾನೆ. ದೇವಸ್ಥಾನದ ಒಳಗಿನ ಬಾವಿಯ ನೀರು ಸಕಲ ರೋಗ ನಿವಾರಕವೆಂದೂ ಬಂಜೆತನ ನಿವಾರಣಾ ಶಕ್ತಿಯನ್ನು ಹೊಂದಿದೆ. ಇಲ್ಲಿ ಸರ್ವಧರ್ಮದ ಸರ್ವ ಜನಾಂಗದ ಎಲ್ಲಾ ಮಂಗಳಕಾರ್ಯಗಳು ನಿರಂತರವಾಗಿ ಜರಗುತ್ತಾ ಬರುತ್ತಿದೆ. ನವರಾತ್ರಿ ಉತ್ಸವ ಹಾಗೂ ಫೆಬ್ರವರಿ ತಿಂಗಳ ೧೦ರಿಂದ ೧೮ರವರೆಗೆ ವಾರ್ಷಿಕ ಜಾತ್ರೋತ್ಸವ ಬಹಳ ವಿಜೃಂಭಣೆಯಿಂದ ಜರಗುತ್ತಿದೆ, ಮಾತ್ರವಲ್ಲದೆ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನಾಗರಪಂಚಮಿ, ಸುಬ್ರಹ್ಮಣ್ಯ ಷಷ್ಠಿ, ನಾರಾಯಣಗುರು ಜಯಂತಿ, ಮಹಾ ಶಿವರಾತ್ರಿ, ಅಯ್ಯಪ್ಪ ದೇವರಿಗೆ ಮಕರ ಸಂಕ್ರಮಣದಂದು ವಿಶೇಷ ಪೂಜೆಗಳು ಜರಗುತ್ತಿವೆ. ಪ್ರತಿ ಸೋಮವಾರ ಅನ್ನದಾನದ ಸೇವೆ ಜರಗುತ್ತಿದ್ದು ಸಮಾಜದ ಬಂಧುಗಳ ವಿದ್ಯಾಭ್ಯಾಸ ಮತ್ತು ಸಂಕಷ್ಟಕ್ಕೆ ನೆರವನ್ನೂ ನೀಡುತ್ತಾ ಬರುತ್ತಿದೆ. ನಾರಾಯಣಗುರು ಸೇವಾದಳ, ನಾರಾಯಣಗುರು ಮಹಿಳಾ ಬಳಗ ಸಕ್ರಿಯವಾಗಿ ಮಾತೃಸಂಸ್ಥೆಗೆ ಸಹಕರಿಸುತ್ತಿದೆ.
ನವೀಕರಣಗೊಂಡ ಶ್ರೀ ವಿಶ್ವನಾಥ ಕ್ಷೇತ್ರ
೨೦೧೧ರಲ್ಲಿ ಕ್ಷೇತ್ರದ ಗೌರವ ಅಧ್ಯಕ್ಷರಾದ ಶ್ರೀ ಜಯ ಸಿ. ಸುವರ್ಣ ಇವರ ಉಪಸ್ಥಿತಿಯಲ್ಲಿ ಜರಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಶ್ರೀ ಅಶೋಕ ಎಂ. ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಕ್ಷೇತ್ರ ನವೀಕರಣದ ದೃಢ ನಿರ್ಧಾರವನ್ನು ಕೈಗೊಂಡಿತು. ಶ್ರೀಕ್ಷೇತ್ರವನ್ನು ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿಗೊಳಿಸಬೇಕೆಂದು ಕನಸು ಕಂಡವರು ಮಾಜಿ ಸಂಸದ ಹಾಗೂ ಹಾಲಿ ಕರ್ನಾಟಕ ರಾಜ್ಯದ ನಗರಾಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರೀ ವಿನಯ್ ಕುಮಾರ್ ಸೊರಕೆಯವರು. ಈ ಕನಸನ್ನು ನನಸು ಮಾಡುವಲ್ಲಿ ಒಂದಡಿ ಹೆಜ್ಜೆ ಮುಂದಿಟ್ಟವರು ಈಗಿನ ಆಡಳಿತ ಮಂಡಳಿ. ಗೌರವಾಧ್ಯಕ್ಷರಾದ ಜಯ ಸಿ. ಸುವರ್ಣ ಇವರ ಮಾರ್ಗದರ್ಶನದಲ್ಲಿ ನವೀಕರಣವೆಂಬ ಮಹಾಯಜ್ಞದ ಸಂಕಲ್ಪವನ್ನು ಕೈಗೊಂಡು, ಆ ನವೀಕರಣ ಸಮಿತಿಗೆ ವಿನಯ್ ಕುಮಾರ್ ಸೊರಕೆಯವರನ್ನು ಗೌರವಾಧ್ಯಕ್ಷರನ್ನಾಗಿ, ಮಾಜಿ ಸಚಿವ ವಸಂತ ವಿ. ಸಾಲ್ಯಾನ್ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸುಮಾರು ೨೦೦ ಸಮಾಜ ಬಾಂಧವರನ್ನೊಳಗೊಂಡ ನವೀಕರಣ ಸಮಿತಿ ರಚನೆ ಮಾಡಿತು. ಮುಂಬಯಿಯಲ್ಲೂ ವೈ. ನಾಗೇಶ್ವರವರ ಅಧ್ಯಕ್ಷತೆಯಲ್ಲಿ ನವೀಕರಣದ ಉಪಸಮಿತಿ ನೇಮಕ ಮಾಡಿ ಸ್ಥಪತಿ ದಕ್ಷಿಣಾ ಮೂರ್ತಿಯವರ ಮಾರ್ಗದರ್ಶನದಲ್ಲಿ ಸುಮಾರು ೫ ಕೋಟಿ ರೂಪಾಯಿಯಲ್ಲಿ ಸಮಗ್ರ ಅಭಿವೃದ್ಧಿ ಪಡಿಸಿ ಇದೀಗ ಶಿಲಾಮಯ ದೇಗುಲವಾಗಿ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಈ ನವೀಕೃತ ದೇಗುಲವು ಕಳೆದ ೨೦೧೪ನೇ ಫೆಬ್ರವರಿ ೯ರಂದು ಶಿವಗಿರಿ ಮಠಾಧೀಶ ಶ್ರೀ ಶ್ರೀ ಪ್ರಕಾಶನಂದ ಸ್ವಾಮೀಜಿಗಳಿಂದ ಪುನಃ ಪ್ರತಿಷ್ಠೆಗೊಂಡು ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣೆಯಾಗಿದೆ. ಇಲ್ಲಿಯೂ ಮುಂಬಯಿ ಉಪಸಮಿತಿಯಿಂದು ಜಯ ಸಿ. ಸುವರ್ಣರವರ ಮಾರ್ಗದರ್ಶನದಲ್ಲಿ ವೈ. ನಾಗೇಶ್ ಮಾರ್ಗದರ್ಶನದಲ್ಲಿ ವೈ. ನಾಗೇಶ್ರವರ ನೇತೃತ್ವದಲ್ಲಿ ಗರಿಷ್ಠ ಮೊತ್ತವನ್ನು ಸಂಗ್ರಹಿಸಿ ನೀಡಿರುತ್ತಾರೆ. ಕರ್ನಾಟಕ ಸರಕಾರದ ಆರ್ಥಿಕ ನೆರವು ತೆಗಿಸಿಕೊಡುವಲ್ಲಿ ದಿ. ವಿ.ಎಸ್. ಆಚಾರ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಾಲಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಟಪಾಡಿ ಶಂಕರಪೂಜಾರಿಯವರ ಕೊಡುಗೆ ಅಮೂಲ್ಯವಾದುದು. ಈ ಮಧ್ಯೆ ನವೀಕರಣ ಸಮಿತಿ ಅಧ್ಯಕ್ಷರಾಗಿ ದಣಿವರಿಯದೆ ದುಡಿದ ಮಾಜಿ ಸಚಿವ ವಸಂತ ಸಾಲ್ಯಾನ್ ಮತ್ತು ನವೀಕರಣ ಸಮಿತಿಯ ಎಲ್ಲಾ ಸದಸ್ಯರು ಆಡಳಿತ ಮಂಡಳಿಯ ಎಲ್ಲಾ ಬಂಧುಗಳು, ಅರ್ಚಕ ವೃಂದ ಸಿಬ್ಬಂದಿ ವರ್ಗ ಹಾಗೂ ಎಲ್ಲಾ ದಾನಿಗಳ ಸೇವೆ ಅಗಣಿತ…
ಇಂದು ಬಿಲ್ಲವರ ದ್ವಿತೀಯ ಕ್ಷೇತ್ರವಾಗಿ ಮುಂಚೂಣಿಯಲ್ಲಿದ್ದು ಊರ ಪರವೂರ ಭಕ್ತಾದಿಗಳನ್ನು ಆಕರ್ಷಿಸುತ್ತಾ ಹಿರಿಯರ ಕನಸನ್ನು ನನಗಾಗಿಸುತ್ತಾ ಉಡುಪಿ ಜಿಲ್ಲೆಯ ಬಿಲ್ಲವರ ಶಕ್ತಿ ಕೇಂದ್ರವಾಗಿ ಮೂಡಿ ಬರುತ್ತಿದೆ. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ.
ಬನ್ನಿ ಶ್ರೀ ವಿಶ್ವನಾಥನ ಸನ್ನಿಧಿಗೆ…
ಶ್ರೀ ಕ್ಷೇತ್ರ ಕಟಪಾಡಿಗೆ
ಅಣ್ಣ ಪೂಣೇಶ್ವರಿಗೆ ನೆಲೆನಿಂತ ನಾಡಿಗೆ.
Shree Vishwanatha Kshethra
Brahmashree Narayan Guru Seva Samiti ®
Katapadi – 574105
Udupi District
PH: 0820 2557060
http://katapadivishwanathakshethra.com